
"ಹರಿದಾಸ ಸಾಹಿತ್ಯ ಅಧ್ಯಯನ ಪೀಠ", ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಜ್ಞಾನ ಗಂಗಾ ಮುಖ್ಯ ಆವರಣ ಸನ್ಮಾನ್ಯರೆ, ನಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕದ ಸಾಹಿತ್ಯ,ಸಂಗೀತ, ಸಂಸ್ಕೃತಿಯಲ್ಲಿ ಹರಿದಾಸ ಸಾಹಿತ್ಯಕ್ಕೆ ತನ್ನದೆ ಆದ ಸ್ಥಾನಮಾನಗಳಿವೆ. ೧೫-೧೬ ನೇ ಶತಮಾನಗಳ ಅವಧಿಯಲ್ಲಿ “ಹರಿದಾಸ ಕೂಟ” ವೆಂಬ ಸಮಾಜೋಧಾರ್ಮಿಕ ವೇದಿಕೆಯ ರೂಪದಲ್ಲಿ ಒಗ್ಗೂಡಿದ ದಾಸ ಶ್ರೇಷ್ಠರು ದಾಸ ಸಾಹಿತ್ಯದ ಅಧ್ಬುತ ಪರಂಪರೆಯನ್ನು ನಿರ್ಮಿಸಿದರು. ಮತ ಧರ್ಮದ ಎಲ್ಲೆಗಳನ್ನು ಮೀರಿ ಕರ್ನಾಟಕದ ಮನೆಮಾತಾದರು. ನರಹರಿತಿರ್ಥರು, ಶ್ರೀಪಾದರಾಯರು, ವಾದಿರಾಜರು, ವ್ಯಾಸರಾಯರು, ಪುರಂದರದಾಸರು, ಕನಕದಾಸರು, ಮಹಿಪತಿದಾಸರು, ಕೀರ್ತನೆ,ಉಗಾಭೋಗ, ಮುಂಡಿಗೆ,ಸುಳಾದಿಗಳೇoಬ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯವನ್ನು ಸೃಷ್ಟಿಸಿ ಕನ್ನಡ ದೇಸೀ ಸಾಹಿತ್ಯದ ಮೆರುಗನ್ನು ಮೆರೆದರು. ಇಂತಹ ಮಹತ್ವಪೂರ್ಣವಾದ ದಾಸ ಸಾಹಿತ್ಯ ಪ್ರಕಾರದ ಅಧ್ಯಯನ ಅನುಸಂದಾನ ಹಾಗೂ ಅನ್ವಯಿಕ ಅಭ್ಯಾಸದ ಗುರಿಯನ್ನಿಟ್ಟುಕೊಂಡು ಗುಲಬರ್ಗಾ ವಿಶ್ವವಿದ್ಯಾಲಯವು ತನ್ನ ಕಾರ್ಯ ವ್ಯವಸ್ಥೆಯ ಅಡಿಯಲ್ಲಿ, ೨೦೦೬ ರಲ್ಲಿ “ಹರಿದಾಸ ಸಾಹಿತ್ಯ ಅಧ್ಯಯನ ಪೀಠ” ವನ್ನು, ಜ್ಞಾನ ಗಂಗಾ ಮುಖ್ಯ ಆವರಣ ದಲ್ಲಿ ಸ್ಥಾಪಿಸಿದೆ. ಅನೇಕ ವರ್ಷದ ಹಿಂದೆ ಸ್ಥಾಪಿಸಿದ ಈ ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳನ್ನು ಸಕ್ರೀಯ ಗೊಳಿಸಲು ರಚನಾತ್ಮಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ವಿಶ್ವವಿದ್ಯಾಲಯವು ನಿರ್ಧರಿಸಿದೆ. ಇಂದಿನ ಹಾಗೂ ಮುಂಬರುವ ಶೈಕ್ಷಣಿಕ ವರ್ಷಗಳಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠದ ಮುಖಾಂತರ ಸಮರ್ಪಕವಾದ ಹಾಗೂ ಪರಿಣಾಮಕಾರಿಯಾದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿಷ್ಚಯಿಸಿದೆ. ಜೊತೆಗೆ ದಾಸ ಸಾಹಿತ್ಯ ಮತ್ತು ಸಂಸ್ಕೃತಿಯ ಶೋಧ-ಪರಿಷ್ಕರಣೆ-ಪ್ರಕಟಣೆ ಹಾಗೂ ಪ್ರಚಾರ ಪ್ರಸಾರದ ಗುರಿಯೊಂದಿಗೆ ಈ ಅಧ್ಯಯನ ಪೀಠವು ಈ ಕೆಳಗಿನ ಮಹತ್ವದ ಕಾರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಉದ್ದೇಶಿಸಿದೆ. ೧. ದಾಸಸಾಹಿತ್ಯದ ಸಂಗ್ರಹ, ಅಧ್ಯಯನ, ಸಂಶೋಧನೆ,ಪ್ರಕಟಣೆ, ಪ್ರಸಾರ ಕಾರ್ಯಗಳನ್ನು ಯೋಜನಾಬಧ್ಧವಾಗಿ ಮಾಡುವುದು. ೨. ಸಂಗೀತ, ನಾಟಕ, ನೃತ್ಯ ಕಲೆಗಳ ಮೂಲಕ ದಾಸಸಾಹಿತ್ಯವನ್ನು ಭಾರತದಾದ್ಯಂತ ಪರಿಚಯಿಸುವುದು. ೩. ಹರಿದಾಸ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವುದು ಹಾಗೂ ಪ್ರಮುಖ ಹರಿದಾಸರ ಸ್ಮಾರಕಗಳನ್ನು ನಿರ್ಮಿಸುವುದು. ೪. ಭಾರತದ ವಿವಿಧ ಭಾಷೆಗಳಿಗೆ ಹರಿದಾಸ ಸಾಹಿತ್ಯವನ್ನು ಅನುವಾದಿಸುವುದು. ೫. ಇತರೆ ಭಕ್ತಿ ಸಾಹಿತ್ಯದೊಂದಿಗೆ ಹರಿದಾಸಸಾಹಿತ್ಯದ ತೌಲನಿಕ ಅಧ್ಯಯನ ಮಾಡುವುದು ೬. ಆಧುನಿಕ ತಂತ್ರಜ್ಞಾನ, ಕಂಪ್ಯೂಟರ,ಅAತರ್ಜಾಲದ ಸಹಾಯದೊಂದಿಗೆ ದಾಸ ಸಾಹಿತ್ಯದ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳವುದು. ಇವೆಲ್ಲ ಯೋಜನೆಗಳು ಕಾರ್ಯಗತವಾಗಬೇಕಾದರೆ ತಮ್ಮಂತಹ ಧರ್ಮಪೀಠಾಧಿಪತಿಗಳ, ಧರ್ಮದರ್ಶಿಗಳ, ಸಾಹಿತ್ಯ ಪ್ರೇಮಿಗಳ, ಪ್ರಜ್ಞಾವಂತರ, ಉದ್ಯಮಿಪತಿಗಳ, ಅಧಿಕಾರಿಗಳ, ವಿವಿಧ ಸಂಘಸoಸ್ಥೆಗಳ ಉದಾರ ಮನಸ್ಸಿನಿಂದ ಕೊಡಮಾಡಲ್ಪಡುವ ಆರ್ಥಿಕ ನೆರವಿನ ಅಗತ್ಯವಿದೆ. ಕಾರಣ ತಾವುಗಳು ಮುಕ್ತಮನಸ್ಸಿನಿಂದ ಈ ಸದುದ್ದೇಶಗಳಿಗೆ ಧನಸಹಾಯ ಮಾಡಿವಿರೆಂದು ವಿಶ್ವವಿದ್ಯಾಲಯದ ಪರವಾಗಿ ತಮ್ಮಲ್ಲಿ ನಿವೇದಿಸಿಕೊಳ್ಳುತ್ತೇನೆ. ದಾನಿಗಳು ತಮ್ಮ ಕಾಣಿಕೆಯನ್ನು ವಿತ್ತಾಧಿಕಾರಿಗಳು ( ದಾಸ ಸಾಹಿತ್ಯ ಅಧ್ಯಯನ ಪೀಠ) ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರ ಹೆಸರಿನಲ್ಲಿ ಡಿಡಿ/ಕ್ರಾಸ ಚೇಕ್ ಅಥವಾ ಆನ್ ಲಾಯಿನ್ ಮುಖಾಂತರ ಸಲ್ಲಿಸಬಹುದಾಗಿದೆ. ವಂದನೆಗಳೊoದಿಗೆ, ಡಾ. ಪರಿಮಳಾ ಅಂಬೇಕರ್ ಸಂಯೋಜಕರು ಹರಿದಾಸ ಸಾಹಿತ್ಯ ಅಧ್ಯಯನ ಪೀಠ ಗುಲಬರ್ಗಾ ವಿಶ್ವವಿದ್ಯಾಲಯ,ಕಲಬುರಗಿ

00
00
06
00
© 2021 All Rights Reserved
Designed by Maheshkumar Adhed